ನಂಬೂದಿರಿಪ್ಪಾಡ್, ಇ ಎಮ್ ಎಸ್

ಭಾರತದ ಒಬ್ಬ ಪ್ರಮುಖ ರಾಜಕಾರಣಿ. ಭಾರತೀಯ ಕಮ್ಯೂನಿಸ್ಟ್ ಪಕ್ಷದ (ಮಾಕ್ರ್ಸಿಸ್ಟ್) ಮುಂದಾಳುಗಳಲ್ಲೊಬ್ಬರು. 1957-59ರಲ್ಲಿ ಮತ್ತು 1967-69ರಲ್ಲಿ ಕೇರಳದ ಮುಖ್ಯಮಂತ್ರಿಯಾಗಿದ್ದರು. ಇ.ಎಂ. ಶಂಕರನ್ ನಂಬೂದಿರಿಪ್ಪಾಡರು ಈಗಿನ ಕೇರಳ ರಾಜ್ಯದ ಪಾಲಕ್ಕಾಡು ಜಿಲ್ಲೆಯ ಏಲಂಕುಳಂನಲ್ಲಿ 1909ರ ಜೂನ್ 14ರಂದು ಜನಿಸಿದರು. ಇವರದು ವಿಚಾರಶೀಲ ನಂಬೂದಿರಿ ಬ್ರಾಹ್ಮಣ ಮನೆತನ. ಏಲಂಕುಳಂ ಮಾನ ಎಂದು ಇವರ ವಂಶ ಪ್ರಸಿದ್ಧವಾದ್ದು. ಇವರ ತಂದೆ ಪರಮೇಶ್ವರಂ ನಂಬೂದಿರಿಪ್ಪಾಡ್. ತಾಯಿ ವಿಷ್ಣುದತ್ತಾ ಅಂತರ್‍ಜನಂ. ಶಂಕರನ್ ನಂಬೂದಿರಿಪ್ಪಾಡರು ಎಳೆಯ ಮಗುವಾಗಿದ್ದಾಗಲೇ ತಂದೆ ತೀರಿಕೊಂಡರು. ಮಗನನ್ನು ಮುಂದಕ್ಕೆ ತರುವ ಹೊಣೆ ತಾಯಿಯದಾಯಿತು. ಆಕೆಯ ಇಬ್ಬರು ಮಕ್ಕಳು ಎಳವೆಯಲ್ಲೇ ತೀರಿಕೊಂಡಿದ್ದರು. ಮೂರನೆಯ ಮಗನ ಬುದ್ಧಿಯ ಬೆಳವಣಿಗೆಯಾಗಿರಲಿಲ್ಲ. ನಾಲ್ಕನೆಯ ಮಗನಾದ ಶಂಕರನ್ ನಂಬೂದಿರಿಪ್ಪಾಡ್ ಒಬ್ಬ ಓತ್ತನ್ (ವೇದಶಾಸ್ತ್ರ ಪಾರಂಗತ) ಆಗಬೇಕೆಂಬುದು ತಾಯಿಯ ಆಶೆ. ಆದರೆ ಇವರು ಭಾರತದ ಕಮ್ಯೂನಿಸ್ಟ್ ಚಳವಳಿಯ ಮುಂದಾಳುಗಳಲ್ಲೊಬ್ಬರಾದರು.

ಶಂಕರನ್ ನಂಬೂದಿರಿಪ್ಪಾಡರು ಚಿಕ್ಕವಯಸ್ಸಿನಲ್ಲಿ ಇತರ ಬ್ರಾಹ್ಮಣ ಬಾಲಕರೊಂದಿಗೆ ಸಂಸ್ಕøತ ಕಲಿತರು. ಆದರೆ, ಇವರಿಗೆ ಅಷ್ಟರಿಂದ ತೃಪ್ತಿಯಾಗಲಿಲ್ಲ. ಏಳನೇ ತರಗತಿಯಿಂದ ಶಾಲಾವ್ಯಾಸಂಗ ಆರಂಭಿಸಿದರು. ಪೆರಿಂದಲ್‍ಮಣ್ಣ ಪ್ರೌಢಶಾಲೆಗೆ ಸೇರಿದರು. ಪಾಲಕ್ಕಾಡಿನ ವಿಕ್ಟೊರಿಯಾ ಪ್ರೌಢಶಾಲೆಯಲ್ಲಿಯೂ ಟ್ರಿಚ್ಚೂರಿನ ಸೇಂಟ್ ತಾಮಸ್ ಕಾಲೇಜಿನಲ್ಲೂ ಶಿಕ್ಷಣ ಪಡೆದರು.

ಚಿಕ್ಕವಯಸ್ಸಿನಲ್ಲೇ ಇವರು ಸಮಾಜ ಸುಧಾರಣಾ ಚಳವಳಿಯ ಪ್ರಭಾವಕ್ಕೆ ಒಳಗಾದರು. ಆ ಕಾಲದಲ್ಲಿ ಈ ಚಳವಳಿ ಕೇರಳದಲ್ಲಿ ಪ್ರಬಲವಾಗಿತ್ತು. ಪ್ರತಿಯೊಂದು ಕೋಮಿನವರೂ ತಮ್ಮ ಅಭ್ಯುದಯಕ್ಕಾಗಿ ಸಂಘ ರಚಿಸಿಕೊಂಡಿದ್ದರು. ನಂಬೂದಿರಿಗಳ ಯೋಗಕ್ಷೇಮ ಸಭಾಗೆ ಇವರು ಸದಸ್ಯರಾದರು. ಈ ಸಂಘದ ಸಂಪರ್ಕದಿಂದಾಗಿಯೇ ಇವರು ಇಂಗ್ಲಿಷ್ ಶಿಕ್ಷಣಕ್ಕೆ ಮಾರು ಹೋದದ್ದು. ಈ ಸಭೆಯ ಕೆಲಸಗಾರರಾಗಿಯೇ ಇವರು ಸಾರ್ವಜನಿಕ ಕ್ಷೇತ್ರವನ್ನು ಪ್ರವೇಶಿಸಿದ್ದು. 1948ರ ವರೆಗೂ ಇವರು ಈ ಸಭೆಯೊಂದಿಗೆ ಸಂಬಂಧ ಇಟ್ಟುಕೊಂಡಿದ್ದರು. ಈ ಸಭೆಯ ತೀವ್ರವಾದಿ ಗುಂಪಿನ ಉನ್ನಿ ನಂಬೂದಿರಿ ಚಳವಳಿಯಲ್ಲಿ ಇವರು ಭಾಗವಹಿಸಿದರು; ತಮ್ಮ ಜನಿವಾರವನ್ನು ಹರಿದೊಗೆದರು. ಅದರ ವಾರಪತ್ರಿಕೆಯ ಸಂಪಾದನೆಯನ್ನು ವಸ್ತುಶಃ ನೋಡಿಕೊಳ್ಳುತ್ತಿದ್ದವರು ಇವರೇ.

ನಂಬೂದಿರಿಪ್ಪಾಡರು ರಾಷ್ಟ್ರೀಯ ಚಳವಳಿಯ ಪ್ರಭಾವಕ್ಕೂ ಒಳಗಾದರು. ಕೆ.ಪಿ. ಕೇಶವ ಮೆನನ್ನರು ರಚಿಸಿದ ಗೋಖಲೆ, ತಿಲಕ್ ಮತ್ತು ಗಾಂಧಿ ಜೀವನ ಚರಿತ್ರೆಗಳು ಇವರ ಮೇಲೆ ತುಂಬ ಪರಿಣಾಮ ಬೀರಿದವು. ಕೇರಳದಲ್ಲಿ ರಾಷ್ಟ್ರೀಯ ಚಳವಳಿಯ ಪ್ರವರ್ತಕರಲ್ಲಿ ಒಬ್ಬರಾದ ಕರೂರು ನೀಲಕಂಠನ್ ನಂಬೂದಿರಿಪ್ಪಾಡರು ಶಂಕರನ್ ನಂಬೂದಿರಿಪ್ಪಾಡರಿಗೆ ತಮ್ಮ ತಾಯಿಯ ಕಡೆಯಿಂದ ಬಂಧುವಾಗಿದ್ದರು. ಅವರಿಂದ ಇವರು ರಾಷ್ಟ್ರೀಯ ಚಳವಳಿಯತ್ತ ಆಕರ್ಷಿತರಾದರು. 1932ರಲ್ಲಿ ಗಾಂಧಿಯವರ ಅಸಹಕಾರ ಚಳವಳಿಯಲ್ಲಿ ಇವರೂ ಭಾಗವಹಿಸಿದರು. ಬಿ.ಎ. ವಿದ್ಯಾರ್ಥಿಯಾಗಿದ್ದ ನಂಬೂದಿರಿಪ್ಪಾಡರ ಶಿಕ್ಷಣ ಮಧ್ಯದಲ್ಲಿಯೇ ತುಂಡಾಯಿತು. ಇವರ ದಸ್ತಗಿರಿಯಾಯಿತು. ಮೂರು ವರ್ಷಗಳ ಜೈಲು ಶಿಕ್ಷೆಗೆ ಇವರು ಗುರಿಯಾದರು. 1933ರಲ್ಲಿ ನಂಬೂದಿರಿಪ್ಪಾಡರು ಬಿಡುಗಡೆ ಹೊಂದಿದರು.

ನಂಬೂದಿರಿಪ್ಪಾಡರು ಕಾರಾಗೃಹದಲ್ಲಿದ್ದಾಗಲೇ ಕ್ರಾಂತಿಯಾದದ್ದು. ಕಣ್ಣನ್ನೂರು ಕಾರಾಗೃಹದಲ್ಲಿ ಇವರೊಂದಿಗೆ ಇದ್ದವರಲ್ಲಿ ಹಲವರು ಕ್ರಾಂತಿಕಾರಿಗಳು. ಕೇರಳದ ಕಮ್ಯೂನಿಸ್ಟ್ ಪಕ್ಷದ ಸ್ಥಾಪಕರಾದ ಪಿ.ಕೃಷ್ಣ ಪಿಳ್ಳೆಯವರೂ ಅವರಲ್ಲಿ ಒಬ್ಬರು. ಪಿಳ್ಳೆಯವರಿಂದಲೂ ಇತರರಿಂದಲೂ ನಂಬೂದಿರಿಪ್ಪಾಡರು ಸಮಾಜವಾದಿಯಾದರು. 1934ರಲ್ಲಿ ಪಟ್ನದಲ್ಲಿ ಸ್ಥಾಪಿತವಾದ ಕಾಂಗ್ರೆಸ್ ಸಮಾಜವಾದಿ ಪಕ್ಷದ ಜಂಟಿ ಕಾರ್ಯದರ್ಶಿಯಾಗಿಯೂ, ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿಯೂ ನಂಬೂದಿರಿಪ್ಪಾಡ್ ಆಯ್ಕೆ ಹೊಂದಿ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ಸಂಘಟನೆಯ ಹೊಣೆ ಹೊತ್ತರು.

1937ರಲ್ಲಿ ಇವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಮದ್ರಾಸ್ ವಿಧಾನಸಭೆಗೆ ಚುನಾಯಿತರಾದರು. 1940ರಲ್ಲಿ ಕೇರಳದ ಸಮಾಜವಾದಿ ಕಾಂಗ್ರೆಸ್ ಪಕ್ಷವನ್ನು ಕಮ್ಯೂನಿಸ್ಟ್ ಪಕ್ಷವಾಗಿ ಪರಿವರ್ತಿಸುವುದರಲ್ಲಿ ಇವರ ಪಾತ್ರ ಪ್ರಧಾನವಾದದ್ದು. ಅಂದಿನಿಂದ ಇವರು ಆ ಪಕ್ಷದ ನಾಯಕತ್ವ ವಹಿಸಿದ್ದಾರೆ.

1952ರಲ್ಲಿ ಪ್ರಥಮ ಮಹಾಚುನಾವಣೆಯಲ್ಲಿ ನಂಬೂದಿರಿಪ್ಪಾಡ್ ಸೋತರು. 1957ರಲ್ಲಿ ಇವರು ಆಯ್ಕೆ ಹೊಂದಿ ಕಮ್ಯೂನಿಸ್ಟ್ ಸಹಯಾತ್ರಿಕರ ನೆರವಿನಿಂದ ಕೇರಳದಲ್ಲಿ ಪ್ರಥಮ ಕಮ್ಯೂನಿಸ್ಟ್ ಸರ್ಕಾರ ರಚಿಸಿ ಮುಖ್ಯಮಂತ್ರಿಯಾದರು. 1959ರಲ್ಲಿ ಕೇಂದ್ರ ಸರ್ಕಾರ ಆ ಸರ್ಕಾರವನ್ನು ವಜಾ ಮಾಡಿತು. ಭಾರತೀಯ ಕಮ್ಯೂನಿಸ್ಟ್ ಪಕ್ಷ ಒಡೆದಾಗ ಇವರು ಮಾಕ್ರ್ಸಿಸ್ಟ್ ಗುಂಪಿನಲ್ಲಿ ಉಳಿದರು. 1967ರಲ್ಲಿ ಸಂಯುಕ್ತರಂಗದ ನಾಯಕರಾಗಿ ಇವರು ಮತ್ತೊಮ್ಮೆ ಮುಖ್ಯಮಂತ್ರಿಯಾದರು. ಭಾರತೀಯ ಕಮ್ಯೂನಿಸ್ಟ್ ಮತ್ತು ಭಾರತೀಯ ಕಮ್ಯೂನಿಸ್ಟ್ (ಮಾಕ್ರ್ಸಿಸ್ಟ್) ಪಕ್ಷಗಳು, ಮುಸ್ಲಿಂಲೀಗ್ ಮತ್ತು ಮೂರು ಪ್ರಾದೇಶಿಕ ಪಕ್ಷಗಳ ನಡುವೆ ಏರ್ಪಟ್ಟಿದ್ದ ಈ ರಂಗದಲ್ಲಿ ಒಡಕು ಹುಟ್ಟಿದಾಗ ಇವರು ರಾಜೀನಾಮೆ ನೀಡಿದರು.

ಇ.ಎಂ.ಎಸ್. ನಂಬೂದಿರಿಪ್ಪಾಡರು ಮಲಯಾಳಂನ ಓರ್ವ ಪ್ರಸಿದ್ಧ ಲೇಖಕರು. ಜವಾಹರ್‍ಲಾಲ್ ನೆಹರುವನ್ನು ಕುರಿತದ್ದು ಇವರ ಮೊದಲ ಪುಸ್ತಕ. ಕೇರಳ ಮಲಯಾಳಿಗಳ ಜನ್ಮದೇಶ, ಕೇರಳ ದೇಶೀಯ ಪ್ರಶ್ನೆ, ಗಾಂಧಿ ಮತ್ತು ಗಾಂಧೀವಾದ, ಆತ್ಮಕಥೆ ಇತ್ಯಾದಿ ಇತ್ಯಾದಿ ಗ್ರಂಥಗಳನ್ನು ಅವರು ರಚಿಸಿದ್ದಾರೆ. ಇಂಗ್ಲಿಷ್‍ನಲ್ಲೂ ಇವರು ಕೆಲವು ಕೃತಿಗಳನ್ನು ಬರೆದಿದ್ದಾರೆ. ಇವರ ಆತ್ಮಕಥೆಗೆ ಕೇರಳ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೊರೆತಿದೆ. ಇವರ ಆತ್ಮಕಥೆ ಒಂದು ಸರಳ ನಿರೂಪಣೆ. ಅದು ಕೇರಳದ ರಾಜಕೀಯ ಚರಿತ್ರಾಂಶಗಳಿಂದ ಕೂಡಿದೆ. ಕನ್ನಡವೂ ಸೇರಿದಂತೆ ಹಲವು ಭಾಷೆಗಳಿಗೆ ಅದು ಅನುವಾದವಾಗಿದೆ. ಸಾಮಾಜಿಕ ಕ್ರಾಂತಿಗೆ ಸಾಹಿತ್ಯ ಒಂದು ಸಾಧನ ಎಂಬುದು ಇವರ ನಂಬಿಕೆ. ಚರಿತ್ರೆಯ ಹಿನ್ನೆಲೆಯಲ್ಲಿ ಸಾಹಿತ್ಯದ ಮೌಲ್ಯ ನಿಷ್ಕರ್ಷೆಯಾಗಬೇಕು ಎಂಬುದು ಇವರ ನಿಲುವು.

ನಂಬೂದಿರಿಪ್ಪಾಡರ ಸಾಂಸಾರಿಕ ಜೀವನ ನೆಮ್ಮದಿಯದು. ಇವರದು ಸರಳ ಜೀವನ. ಇವರ ಹೆಂಡತಿ ಆರ್ಯಾ ಅಂತರ್‍ಜನಂ. ಇವರ ಮಕ್ಕಳಲ್ಲಿ ಇಬ್ಬರು ಪುತ್ರರು. ಇಬ್ಬರು ಪುತ್ರಿಯರು.			
	(ಸಿ.ಕೆ.ಎ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ